ಚುನಾವಣೆ ಪರಿಣಾಮ: ‘ಜನ ನಾಯಗನ್’ ಚಿತ್ರಕ್ಕೆ ಬ್ರೇಕ್
ನಟನೆಯ ‘ಜನ ನಾಯಗನ್’ ಸಿನಿಮಾ ರಾಜಕೀಯಕ್ಕೆ ಸಿಲುಕಿ ಇನ್ನೂ ಬಿಡುಗಡೆ ಆಗಿಲ್ಲ. ಜನವರಿ 09 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾ ಸಿಬಿಎಫ್ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ವಿಳಂಬ ನೀತಿ ಅನುಸರಿಸಿತು. ಇದೇ ಕಾರಣಕ್ಕೆ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್, ನ್ಯಾಯಾಲಯದ ಮೆಟ್ಟಿಲೇರಿತು. ಆದರೆ ಅಲ್ಲಿ ವಿಚಾರಣೆ ತಡವಾಗಿ ಸಿನಿಮಾದ ಬಿಡುಗಡೆ ಇನ್ನಷ್ಟು ವಿಳಂಬವಾಯ್ತು. ಆದರೆ ನಿರ್ಮಾಪಕರು ಕೇಸು ಹಿಂಪಡೆದು, ಸಿಬಿಎಫ್ಸಿಯಿಂದಲೇ ಪ್ರಮಾಣ ಪತ್ರ ಪಡೆಯಲು ಮುಂದಾದರು. ಆದರೆ ಮತ್ತೆ ಉದ್ದೇಶಪೂರ್ವಕ (?) ವಿಳಂಬ ಮಾಡಲಾಯ್ತು. ಇದೀಗ ಮತ್ತೊಮ್ಮೆ ಸಿನಿಮಾದ ಬಿಡುಗಡೆ ತಡವಾಗುತ್ತಿದೆ. ಆ ಮೂಲಕ ವಿಜಯ್ ಅವರ ರಾಜಕೀಯ ವಿರೋಧಿಗಳ ಕೈ ಮೇಲಾಗಿದೆ. ಅವರ ಉದ್ದೇಶ ಈಡೇರಿದೆ.
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಇಂದು (ಮಾರ್ಚ್ 15) ಘೋಷಣೆ ಆಗಿದ್ದು, ‘ಜನ ನಾಯಗನ್’ ಸಿನಿಮಾದ ನಾಯಕ ದಳಪತಿ ವಿಜಯ್ ಸಹ ಚುನಾವಣೆಗೆ ಸ್ಪರ್ಧಿಸಲಿದ್ದು, ಇಂದಿನಿಂದಲೇ ರಾಜ್ಯದಾದ್ಯಂತ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಿನಿಮಾದ ಬಿಡುಗಡೆ ಬಹುತೇಕ ಅಸಾಧ್ಯವಾಗಿದೆ. ನೀತಿ ಸಂಹಿತೆ ಪ್ರಕಾರ, ಚುನಾವಣಾ ಪಕ್ಷದ ಪರವಾಗಿ ಪ್ರಚಾರ ಮಾಡುವ, ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಮತದಾರರ ಮೇಲೆ ಪ್ರಭಾವ ಬೀರುವ ಇತರೆ ರಾಜಕೀಯ ಪಕ್ಷಗಳ ಟೀಕೆ ಮಾಡುವಂಥಹಾ ಸಿನಿಮಾಗಳನ್ನು ಪ್ರದರ್ಶಿಸುವಂತಿಲ್ಲ. ಹಾಗಾಗಿ ‘ಜನ ನಾಯಗನ್’ ಸಿನಿಮಾದ ಬಿಡುಗಡೆ ಇನ್ನಷ್ಟು ವಿಳಂಬ ಆಗಲಿದೆ.
‘ಜನ ನಾಯಗನ್’ ಸಿನಿಮಾವು ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆಗಿದ್ದರೂ ಸಹ ಸಿನಿಮಾನಲ್ಲಿ ಕೆಲವು ರಾಜಕೀಯ ಪಕ್ಷಗಳನ್ನು ಟೀಕೆ ಮಾಡುವ ದೃಶ್ಯಗಳಿವೆ. ಅಲ್ಲದೆ, ವಿಜಯ್ ಅವರ ಪಕ್ಷದ ಬಗ್ಗೆ ಪ್ರಚಾರಾತ್ಮಕ ಎನ್ನಬಹುದಾದ ಕೆಲವು ಸಂಭಾಷಣೆಗಳು ಇವೆಯಂತೆ. ಇದೇ ಕಾರಣಕ್ಕೆ ಸಿಬಿಎಫ್ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿತ್ತು. ಇದೀಗ ಮಾಡೆಲ್ ಕೋಡ್ ಆಫ್ ಕಂಡಕ್ಟ್ ಜಾರಿಗೆ ಬಂದಿರುವ ಕಾರಣ, ಸಿಬಿಎಫ್ಸಿ ಪ್ರಮಾಣ ಪತ್ರ ನೀಡಿದರೂ ಸಹ ಸಿನಿಮಾದ ಬಿಡುಗಡೆ ಅಸಾಧ್ಯ ಎಂಬಂತಾಗಿದೆ.
ಇದನ್ನೂ ಓದಿ:‘ಧುರಂಧರ್ 2’ ಜೊತೆ ಕ್ಲ್ಯಾಶ್ ಮಿಸ್ ಮಾಡಿಕೊಂಡ ‘ಟಾಕ್ಸಿಕ್’ ಎದುರು ಬರ್ತಿವೆ ಡಜನ್ ಸಿನಿಮಾಗಳು
ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 23, 2026 ಕ್ಕೆ ನಿಗದಿ ಆಗಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ. ಈ ಅವಧಿಯಲ್ಲಿ ರಾಜ್ಯದಾದ್ಯಂತ ಮಾದರಿ ಚುನಾವಣಾ ನೀತಿ ಸಂಹಿತೆ (MCC) ಜಾರಿಯಲ್ಲಿರುವುದರಿಂದ, ಫಲಿತಾಂಶದ ಬಳಿಕ ಅಂದರೆ ಮೇ ತಿಂಗಳಲ್ಲಿಯೇ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಸಾಧ್ಯ ಎನ್ನಲಾಗುತ್ತಿದೆ.
ವಿಜಯ್ ಅವರ ರಾಜಕೀಯ ವಿರೋಧಿಗಳು ‘ಜನ ನಾಯಗನ್’ ಸಿನಿಮಾವನ್ನು ಚುನಾವಣೆಗೆ ಮುಂಚೆ ಬಿಡುಗಡೆ ಮಾಡದಂತೆ ತಡೆಹಿಡಿಯಲು ಯಶಸ್ವಿ ಆಗಿದ್ದು, ವಿಜಯ್ಗೆ ದೊಡ್ಡ ರಾಜಕೀಯ ಪೆಟ್ಟನ್ನೇ ನೀಡಿದ್ದಾರೆ. ಇನ್ನು ವಿಜಯ್ ಅವರು ತಮಿಳಗ ವೆಟ್ರಿ ಕಳಗಂ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ದು, ರಾಜ್ಯದ ಎಲ್ಲ ಕ್ಷೇತ್ರಗಳಿಂದಲೂ ಅವರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರಂತೆ. ಸ್ವತಃ ವಿಜಯ್ ಅವರು ಎರಡು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.














Comments