ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್ ವಶಕ್ಕೆ
ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್ರನ್ನು ದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸುವ ಮೂಲಕ ಶಾಕ್ ನೀಡಿತ್ತು. ಇದೀಗ ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಪೊಲೀಸರು ಶಾಸಕನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು, ಫೆಬ್ರವರಿ 12: ಸೈಟ್ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ವಿ.ಜಿ.ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ (Biklu Shiva Murder Case) ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಕೊನೆಗೂ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜ್ನ್ನು (Byrathi Basavaraj) ದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಹಿನ್ನೆಲೆ ಭೈರತಿ ಬಸವರಾಜ್ ತಲೆಮರೆಸಿಕೊಂಡಿದ್ದರು. ಇದೀಗ ಇಂಡಿಗೋ 6E683 ವಿಮಾನದಲ್ಲಿ ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಇಂದು ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿತ್ತು. ಸುಪ್ರೀಂಕೋರ್ಟ್‌ನಲ್ಲಿ ನಿರೀಕ್ಷಣಾ ಅರ್ಜಿ ವಜಾ ಆಗುತ್ತಿದ್ದಂತೆ ಭೈರತಿಗೆ ಬೇರೆ ದಾರಿಯೇ ಇಲ್ಲದಂತಾಗಿತ್ತು. ತಲೆಮರೆಸಿಕೊಂಡಿದ್ದ ಭೈರತಿ, ಸಿಐಡಿ ಮುಂದೆ ಶರಣಾಗಲು ನಿರ್ಧರಿಸಿದ್ದರು. ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಹಮದಾಬಾದ್‌ನಿಂದ ಬಂದು ಇಳಿದು ಹೊರ ಬರುತ್ತಿದ್ದಂತೆ ದೇವನಹಳ್ಳಿ ಎಸಿಪಿ ಹರ್ಷ ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಪೊಲೀಸರು ಭೈರತಿ ಬಸವರಾಜ್ನನ್ನ ಏರ್ಪೋರ್ಟ್ನಿಂದ ನೇರವಾಗಿ ಸಿಐಡಿ ಕಚೇರಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇಂದು ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ಬಹುತೇಕ ನಾಳೆ ಜಡ್ಜ್ ಎದುರು ಹಾಜರುಪಡಿಸುವ ಸಾಧ್ಯತೆ ಇದೆ. ಇನ್ನು ಸಿಐಡಿ ಜಡ್ಜ್ ಎದುರು ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಲಿದೆ.
ಪ್ರಕರಣ ಹಿನ್ನೆಲೆ
ಕಿತ್ತಗನೂರಿನ ಜಮೀನು ವಿವಾದದ ಹಿನ್ನೆಲೆ ಕಳೆದ ವರ್ಷ ಜುಲೈ 15 ರಂದು ದುಷ್ಕರ್ಮಿಗಳ ಗುಂಪೊಂದು ಮಾಜಿ ರೌಡಿ ಶೀಟರ್ ಬಿಕ್ಲು ಶಿವನನ್ನು ಮಚ್ಚು, ಲಾಂಗ್ಗಳಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದರು. ಮೃತನ ತಾಯಿ ಭೈರತಿ ಬಸವರಾಜ್ ಸೇರಿದಂತೆ ಹಲವರ ಮೇಲೆ ದೂರು ನೀಡಿದ್ದರು. ಭೈರತಿ ಬಸವರಾಜ್ ಕೈವಾಡ ಇದೆ ಅಂತಾ ಆರೋಪಿಸಿದ್ದರು. ಈ ಸಂಬಂಧ ಶಾಸಕರ ವಿರುದ್ಧ FIR ದಾಖಲಾಗಿತ್ತು. A1 ಜಗದೀಶ್ ಜೊತೆ ಶಾಸಕರಿಗೆ ನಂಟು ಇದೆ ಎಂಬ ಆರೋಪವಿದ್ದು, ಕೊಲೆ ಕೇಸ್‌ನಲ್ಲಿ ಭೈರತಿ ಬಸವರಾಜ್ A5 ಆಗಿದ್ದಾರೆ.














Comments