ಮಾರ್ಯಮ್ ಎಚ್ಚರಿಕೆ: ಮ್ಯಾನ್ಹೋಲ್ ಕಳ್ಳತನಕ್ಕೆ 10 ವರ್ಷ ಜೈಲು
Crime rates increase in Pakistan as its economy in shambles: ಕೆಲ ದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಿ, ತಾವು ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಾಯ ಕೇಳಲು ಹೋದಾಗ ಏನಾಯ್ತು ಎಂಬುದನ್ನ ಹೇಳಿದ್ದು ಹಲವರಿಗೆ ನೆನಪಿರಬಹುದು. ಸಾಲ ಕೇಳಲು ಹೋದಾಗ ನಾಚಿಕೆಯಿಂದ ತಲೆ ತಗ್ಗಿಸುವಂತಾಗುತ್ತದೆ ಎಂದಿದ್ದರು ಪ್ರಧಾನಿ ಶಾಹಬಾಜ್ ಷರೀಫ್. ಈಗ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ಶರೀಫ್ ಹೇಳೋದು ಕೇಳಿ ನೋಡಿ... ಪಾಕಿಸ್ತಾನದಲ್ಲಿರುವ ಬಡತನ ಅಲ್ಲಿಯ ಜನರ ಕೈಯಿಂದ ಏನೆಲ್ಲಾ ಕೆಲಸ ಮಾಡಿಸುತ್ತೆ ನೋಡಿ...
ನವದೆಹಲಿ, ಫೆಬ್ರುವರಿ 6: ಅಧಿಕ ಹಣದುಬ್ಬರ, ಮಂದ ಬೆಳವಣಿಗೆ, ಸಾಲದ ಹೊರೆ, ಪರಾವಲಂಬನೆ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಆಂತರಿಕ ಕ್ಷೋಭೆ ಹೆಚ್ಚುತ್ತಿದೆ. ಅಲ್ಲಿಯ ಜನರಿಗೆ ಸರಿಯಾದ ಕೆಲಸ ಇಲ್ಲದೇ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಪಾಕಿಸ್ತಾನದ ಮಾಧ್ಯಮಗಳಲ್ಲೇ ಬಂದ ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಜನರು ರಸ್ತೆಯ ಮೋರಿಯ ಮ್ಯಾನ್ಹೋಲ್ ಮುಚ್ಚಳವನ್ನೂ ಬಿಡದೆ ಕಳ್ಳತನ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆಯಂತೆ.
ಕಬ್ಬಿಣದ ಈ ಮುಚ್ಚಳಗಳು ಬಹಳ ತೂಕವಿದ್ದು, ಅವನ್ನು ಮಾರಿ ಜನರು ಹಣ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಕಳ್ಳತನ ಪ್ರಕರಣಗಳು ಆಗೊಮ್ಮೆ ಈಗೊಮ್ಮೆ ಬೆಳಕಿಗೆ ಬರುತ್ತಿಲ್ಲ, ಸರ್ವೇಸಾಮಾನ್ಯ ಘಟನೆಗಳೇ ಆಗಿಹೋಗಿವೆ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮಾರ್ಯಂ ಷರೀಫ್ ಅವರೇ ಖುದ್ದಾಗಿ ವಿಡಿಯೋ ಮೆಸೇಜ್ ನೀಡಿ ಕಳ್ಳರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
‘ಮ್ಯಾನ್ಹೋಲ್ಗಳ ಮುಚ್ಚಳವನ್ನು ಬೆಳಗ್ಗೆ ಹಾಕಿರುತ್ತೇವೆ. ರಾತ್ರಿ ಮುಗಿಯುವುದರೊಳಗೆ ಅದು ಕಳ್ಳತನ ಆಗಿರುತ್ತದೆ. ಈ ಮುಚ್ಚಳವನ್ನು ಕಳ್ಳತನ ಮಾಡಬೇಡಿ. ಕಳ್ಳತನ ಮಾಡಿದರೆ, ಅಥವಾ ಅದನ್ನು ಮಾರಿದರೆ ಅಥವಾ ಖರೀದಿಸಿದರೆ ಅಂಥವರಿಗೆ 1-10 ವರ್ಷ ಜೈಲು ಶಿಕ್ಷೆ ನೀಡುವಂತಹ ಕಾನೂನನ್ನು ಜಾರಿಗೆ ತರಲಾಗುತ್ತಿದೆ. ಈ ಕಳ್ಳತನದಿಂದಾಗಿ ಯಾರಿಗಾದರೂ ಸಾವಾದರೆ, ಅಪರಾಧಿಗೆ 10 ವರ್ಷ ಜೈಲುಶಿಕ್ಷೆ ಹಾಗೂ 30-50 ಲಕ್ಷ ರೂ ದಂಡ ಹಾಕಲಾಗುವುದು ಎಂದು ಮಾರ್ಯಮ್ ಷರೀಫ್ ತಮ್ಮ ವಿಡಿಯೋ ಮೆಸೇಜ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಭಿಕ್ಷೆ ಬೇಡಿ, ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎನ್ನುತ್ತಿರುವ ಪ್ರಧಾನಿ
ಹಣಕ್ಕಾಗಿ ಜಗತ್ತಿನ ಮುಂದೆ ಭಿಕ್ಷೆ ಎತ್ತುವಾಗ ನಾಚಿಕೆಯಿಂದ ತಲೆ ತಗ್ಗಿಸುವಂತಾಗುತ್ತದೆ. ಸಾಲ ಪಡೆಯುವುದೆಂದರೆ ಸ್ವಾಭಿಮಾನ ಬಿಟ್ಟುಕೊಟ್ಟಂತೆ ಅನಿಸುತ್ತೆ. ಅವರು ಹೇಳುವ ಯಾವುದೇ ಕೆಲಸವನ್ನೂ ಇಲ್ಲ ಎನ್ನಲು ಆಗುವುದೇ ಇಲ್ಲ ಎಂದು ವಾರದ ಹಿಂದೆ ಪಾಕಿಸ್ತಾನ ಪ್ರಧಾನಿ ಶಾಹಬಾಜ್ ಷರೀಫ್ ಅಳಲು ತೋಡಿಕೊಂಡಿದ್ದರು.
ಸಾಲದ ಹೊರೆಯಲ್ಲಿರುವ ಪಾಕಿಸ್ತಾನ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದೆ. ಸಾಲದ ಬಡ್ಡಿ ಪಾವತಿಸಲು ದುಡ್ಡಿಲ್ಲದೆ ಸಾಲ ಮಾಡಬೇಕಾದ ಪರಿಸ್ಥಿತಿ ಇದೆ. ಪದೇ ಪದೇ ಐಎಂಎಫ್ ಮುಂದೆ ಸಾಲಕ್ಕಾಗಿ ಪಾಕಿಸ್ತಾನ ಕೈ ಚಾಚುವಂತಾಗಿದೆ. ಚೀನಾ ಜೊತೆಗೆ ಸೇರಿ ಜಂಟಿಯಾಗಿ ತಯಾರಿಸಲಾಗುತ್ತಿರುವ ಯುದ್ಧವಿಮಾನ ಇತ್ಯಾದಿ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಮಾರಾಟಕ್ಕಿಟ್ಟು ಸಾಲ ತೀರಿಸಲು ಪಾಕಿಸ್ತಾನ ಹೆಣಗುತ್ತಿದೆ.














Comments