ಸುರಕ್ಷತೆ-ಆರಾಮ VB ಸ್ಲೀಪರ್: ರಾತ್ರಿ ಪ್ರಯಾಣಕ್ಕೆ ವಿಶ್ವದರ್ಜೆ
ನೂತನ ವಂದೇ ಭಾರತ್ ಸ್ಲೀಪರ್ ರೈಲು ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಳದ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸುಧಾರಿತ ಸುರಕ್ಷತಾ ವ್ಯವಸ್ಥೆ, ವಿಶ್ವ ದರ್ಜೆಯ ಬೋಗಿಗಳನ್ನು ಹೊಂದಿದೆ. ಈ ರೈಲು ಯಾವಾಗಿಂದ ಸಂಚಾರ ಆರಂಭಿಸಲಿದೆ? ಯಾವ ಮಾರ್ಗದಲ್ಲಿ ಸಾಗಲಿದೆ? ಇದರ ದರ ಎಷ್ಟಿರಲಿದೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ನವದೆಹಲಿ, ಜನವರಿ 1: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Train) ಗುವಾಹಟಿ-ಕೊಲ್ಕತ್ತಾ ಮಾರ್ಗದಲ್ಲಿ ಸಂಚಾರ ನಡೆಸಲಿದ್ದು, ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ. ಕೊಲ್ಕತ್ತಾದಿಂದ ಗುವಾಹಟಿಗೆ ಹೋಗುವ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಮುಂದಿನ 15-20 ದಿನಗಳಲ್ಲಿ ಅಂದರೆ ಜನವರಿ 18 ಅಥವಾ 19ರ ಸುಮಾರಿಗೆ ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟನೆ ನಡೆಯುವ ನಿರೀಕ್ಷೆಯಿದೆ ಎಂದು ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹೊಸ ಸ್ಲೀಪರ್ ರೈಲಿನ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದೆ.
“ಬಹಳ ದಿನಗಳಿಂದ ಹೊಸ ಪೀಳಿಗೆಯ ರೈಲುಗಳಿಗೆ ಬೇಡಿಕೆ ಹೆಚ್ಚಾಗಿದೆ. ವಂದೇ ಭಾರತ್ ಚೇರ್ ಕಾರ್ ಭಾರತೀಯ ರೈಲ್ವೆಯಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದೆ. ಜನರು ಇದನ್ನು ತುಂಬಾ ಇಷ್ಟಪಡಲು ಪ್ರಾರಂಭಿಸಿದ್ದಾರೆ. ವಂದೇ ಭಾರತ್ ರೈಲುಗಳನ್ನು ಓಡಿಸಲು ದೇಶದ ಮೂಲೆ ಮೂಲೆಗಳಿಂದ ಬೇಡಿಕೆಗಳು ಬರುತ್ತಿವೆ” ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಹೊಸ ದರಗಳ ಪ್ರಕಾರ, 3ನೇ ಎಸಿ ಕೋಚ್‌ಗಳ ದರ ಆಹಾರ ಸೇರಿದಂತೆ 2,300 ರೂ., 2ನೇ ಎಸಿ ದರ 3,000 ರೂ. ಮತ್ತು 3ಡಿಡಿ ಎಸಿ ಕೋಚ್‌ಗಳ ದರ 3,600 ರೂ. ಆಗಿರುತ್ತದೆ. ಈ ಎಲ್ಲಾ ದರಗಳು ಆಹಾರವನ್ನು ಒಳಗೊಂಡಿರುತ್ತವೆ. “ಇದರ ಪ್ರಯಾಣ ದರವನ್ನು ವಿಮಾನದ ದರಕ್ಕಿಂತ ಕಡಿಮೆ ಇರಿಸಲಾಗಿದೆ. ಗುವಾಹಟಿಯಿಂದ ಹೌರಾಗೆ ವಿಮಾನ ದರ ಸಾಮಾನ್ಯವಾಗಿ 6,000 ರೂ.ನಿಂದ 8,000 ರೂ.ವರೆಗೆ ಇರುತ್ತದೆ. ವಂದೇ ಭಾರತ್ ರೈಲಿನಲ್ಲಿ 3ನೇ ಎಸಿ ದರವು ಊಟ ಸೇರಿದಂತೆ ಸುಮಾರು 2,300 ರೂ. ಇರಲಿದೆ. 2ನೇ ಎಸಿಗೆ ಸುಮಾರು 3,000 ರೂ. ಮತ್ತು 1ನೇ ಎಸಿಗೆ ಸುಮಾರು 3,600 ರೂ. ಆಗಿರುತ್ತದೆ. ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಈ ದರಗಳನ್ನು ನಿಗದಿಪಡಿಸಲಾಗಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
“ವಂದೇ ಭಾರತ್ ಸ್ಲೀಪರ್ ರೈಲನ್ನು ಸಾವಿರ ಕಿಲೋಮೀಟರ್‌ಗಳಿಗೂ ಹೆಚ್ಚಿನ ದೂರದ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಈ ರೈಲು ದೂರದ ಪ್ರಯಾಣಿಕರಿಗೆ ವೇಗದ, ಆರಾಮದಾಯಕ ಮತ್ತು ಆಧುನಿಕ ಪ್ರಯಾಣದ ಅನುಭವವನ್ನು ನೀಡುತ್ತದೆ. ವಂದೇ ಭಾರತ್ ಸ್ಲೀಪರ್ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು, ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆ ಮತ್ತು ರಾತ್ರಿ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ವಿಶ್ವ ದರ್ಜೆಯ ಸ್ಲೀಪರ್ ಕೋಚ್‌ಗಳನ್ನು ಹೊಂದಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಈ ವಂದೇ ಭಾರತ್ ಸ್ಲೀಪರ್ ರೈಲಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ವಾರಾಂತ್ಯದೊಳಗೆ ನೀಡಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದರು. ಮೊದಲ ಹಂತವಾಗಿ ಎರಡು ಸ್ಲೀಪರ್ ರೈಲುಗಳನ್ನು ಪ್ರಾರಂಭಿಸಲಾಗುವುದು. ಇವು ಎರಡೂ ಕಡೆಯಿಂದ ಕಾರ್ಯನಿರ್ವಹಿಸುತ್ತವೆ. ಪ್ರಯಾಣವು ರಾತ್ರಿಯದ್ದಾಗಿರುತ್ತದೆ. ರೈಲಿನಲ್ಲಿ ರಾತ್ರಿ ಭೋಜನ ಮತ್ತು ಬೆಳಿಗ್ಗೆ ಚಹಾವನ್ನು ನೀಡಲಾಗುತ್ತದೆ.













Comments