ಸುರೇಶ್ ಕುಮಾರ್ 702 ಕಿ.ಮೀ ಸಾಧನೆ: PM ಮೋದಿ ಅಭಿನಂದನೆ
ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ 702 ಕಿ.ಮೀ ಸೈಕಲ್ ಸವಾರಿ ಮಾಡಿದ ಬಿಜೆಪಿ ಶಾಸಕ ಸುರೇಶ್ ಕುಮಾರ್ (Suresh Kumar) ಅವರನ್ನು ಪ್ರಧಾನಿ ಮೋದಿ (PM Modi) ಶ್ಲಾಘಿಸಿದ್ದಾರೆ. “ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಸವಾರಿ ಕೈಗೊಂಡ ಎಸ್. ಸುರೇಶ್ ಕುಮಾರ್ ಅವರ ಸಾಧನೆ ಶ್ಲಾಘನೀಯ ಮತ್ತು ಸ್ಫೂರ್ತಿದಾಯಕವಾಗಿದೆ. ಆರೋಗ್ಯದ ಸಮಸ್ಯೆಗಳನ್ನು ಮೆಟ್ಟಿ ನಿಂತು ಅವರು ಈ ಸಾಧನೆ ಮಾಡಿರುವುದು ಅವರ ದೃಢ ನಿರ್ಧಾರ ಮತ್ತು ಅಚಲ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಇದು ಫಿಟ್ನೆಸ್ ಕುರಿತು ಪ್ರಮುಖ ಸಂದೇಶವನ್ನೂ ನೀಡುತ್ತದೆ. ಅವರೊಂದಿಗೆ ಮಾತನಾಡಿ, ಅವರ ಈ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
70 ವರ್ಷದ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಇತ್ತೀಚೆಗೆ ತಿಂಗಳುಗಟ್ಟಲೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಅಪರೂಪದ ನರವೈಜ್ಞಾನಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದ ಅವರು ವಿಶ್ರಾಂತಿಯಲ್ಲಿದ್ದರು. ಆದರೂ 5 ದಿನಗಳ ಕಾಲ ಈ ಸವಾಲಿನ 702 ಕಿ.ಮೀ ಪ್ರಯಾಣವನ್ನು ಸೈಕಲ್ನಲ್ಲೇ ಪೂರ್ಣಗೊಳಿಸಿದ್ದಾರೆ.
ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್, ಪ್ರಧಾನಿ ಮೋದಿಯವರೇ ಕರೆ ಮಾಡಿ ಅಭಿನಂದಿಸಿದ್ದಕ್ಕೆ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. “ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ನಾನು 51 ವರ್ಷಗಳ ನಂತರ ನನ್ನ ಸೈಕ್ಲಿಂಗ್ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಪ್ರಯಾಣ ಮಾಡಿದ್ದೇನೆ. ಕನ್ಯಾಕುಮಾರಿಗೆ ಇದು ನನ್ನ ಎರಡನೇ ಸೈಕ್ಲಿಂಗ್ ಎಂದು ತಿಳಿದು ಪ್ರಧಾನಿ ಮೋದಿ ಸಂತೋಷಪಟ್ಟರು. 2025ರಲ್ಲಿ ನಮ್ಮ ತಂಡ 8,000 ಕಿ.ಮೀ ದೂರದಷ್ಟು ಸೈಕ್ಲಿಂಗ್ ಮಾಡಿರುವ ಮಾಹಿತಿ ಪಡೆದು ತಮ್ಮ ಅಚ್ಚರಿ ಮತ್ತು ಸಂತಸ ಎರಡನ್ನೂ ವ್ಯಕ್ತಪಡಿಸಿದರು. ಅದರಲ್ಲೂ ತೀವ್ರ ಅನಾರೋಗ್ಯದ ನಂತರ ನಾನು ಈ ಕಾರ್ಯ ಕೈಗೊಂಡ ಬಗ್ಗೆ ಪ್ರಧಾನ ಮಂತ್ರಿಗಳು ನನ್ನ ಬೆನ್ನು ತಟ್ಟಿದ್ದು ನನ್ನ ಸುಕೃತ” ಎಂದು ಸುರೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವರೂ ಆಗಿರುವ ಸುರೇಶ್ ಕುಮಾರ್ ಅವರು “ರಾಜಾಜಿನಗರ ಪೆಡಲ್ ಪವರ್’ ಬ್ಯಾನರ್ ಅಡಿಯಲ್ಲಿ ಯುವಕರೊಂದಿಗೆ 5 ದಿನಗಳ, 702 ಕಿಮೀ ಸೈಕಲ್ ಸವಾರಿಯನ್ನು ಮಾಡಿದ್ದಾರೆ.













Comments